ಕ್ವಾರಂಟೈನ್ ಮುಗಿದ ಬಳಿಕ 46 ವಿದೇಶಿ ತಬ್ಲಿಘಿಗಳನ್ನು ಜೈಲಿಗೆ ಅಟ್ಟಿದ ನಿತೀಶ್ ಕುಮಾರ್ ಸರ್ಕಾರ

ದೆಹಲಿಯ ತಬ್ಲಿಘಿ ಜಮಾತ್ ಮುಸ್ಲಿಂ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ 46 ಮಂದಿ ವಿದೇಶಿ ತಬ್ಲಿಘಿಗಳನ್ನು ಕ್ವಾರಂಟೈನ್ ಮುಗಿದ ಬಳಿಕ ಬಿಹಾರ ಸರ್ಕಾರ  ಜೈಲಿಗಟ್ಟಿದೆ. ವೀಸಾ ಉಲ್ಲಂಘನೆ ಆರೋಪದ ಮೇಲೆ ಜೈಲಿಗೆ ಕಳುಹಿಸಲಾಗಿದ್ದು, ಕಿರ್ಗಿಸ್ತಾನ, ಮಲೇಶಿಯಾ ಮತ್ತು ಬಾಂಗ್ಲಾದೇಶದ 46 ಮಂದಿ ವಿರುದ್ಧ ಕೇಸು ದಾಖಲಾಗಿದೆ.ಬಿಹಾರ ಸರಕಾರ ಕೂಡ ಈ ಹಿಂದೆ ಯೋಗಿ ಆದಿತ್ಯನಾಥ್ ಮಾದರಿ ಕ್ರಮ ಕೈಗೊಳ್ಳುತ್ತಿದೆ.

ಪ್ರವಾಸಿ ವೀಸಾ ಪಡೆದ ವಿದೇಶಿ ಪ್ರಜೆಗಳು ಇತ್ತೀಚೆಗೆ ದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಬಿಹಾರ್ ಗೆ ತೆರಳಿದ್ದರು. ಈ ವಿಚಾರ ತಿಳಿದ ಬಳಿಕ ಮಲೇಶಿಯಾದ 20 ಮಂದಿ ಸೇರಿದಂತೆ ಕಿರ್ಗಿಸ್ತಾನ್, ಬಾಂಗ್ಲಾದೇಶ ಮತ್ತು ಇಂಡೋನೇಶ್ಯಾದ ವಿದೇಶಿ ಪ್ರಜೆಗಳ ವಿರುದ್ಧ 1946ರ ವಿದೇಶಿ ಕಾಯ್ದೆ ಸೆಕ್ಷನ್ 14ರ ಅಡಿಯಲ್ಲಿ ಕೇಸು ದಾಖಲಿಸಲಾಗಿತ್ತು. ಇದೀಗ ಆರೋಪ ಹೊತ್ತಿರುವ ಎಲ್ಲರನ್ನೂ ಸೆರೆಮನೆಯಲ್ಲಿ ಇಡಲಾಗಿದೆ.

ಬಿಹಾರದ ಅರಾರಿಯಾದಲ್ಲಿ 18 ಮಂದಿ, 11 ಮಂದಿ ಬಕ್ಸರ್ ಮತ್ತು 17 ಮಂದಿ ಪಾಟ್ನಾದಲ್ಲಿ ತಂಗಿದ್ದ ವೇಳೆ ಇತ್ತೀಚೆಗೆ ಪೊಲೀಸರು ಬಂಧಿಸಿದ್ದರು. ಈ ವೇಳೆ ಅವರ ಪಾಸ್ ಪೋರ್ಟ್, ವೀಸಾ ಮತ್ತು ಇತರ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಅನೇಕ ಮಂದಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿತ್ತು. ಇದು ದೇಶದಾದ್ಯಂತ ಸುದ್ದಿಯಾಗಿತ್ತು

Comments