ಮೋದಿ ಮಾತಿನಿಂದ ಪ್ರೇರಣೆಗೊಂಡು ಒಂದು ಲಕ್ಷ ಉಳಿಸಿದ ಕೇರಳದ ಈ ಕುಟುಂಬ!

ಇತ್ತೀಚಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೊದಲನೇ ಹಂತದ ಲಾಕ್‌ಡೌನ್‌ ಘೋಷಣೆ ಮಾಡುವ ಸಮಯದಲ್ಲಿ ಹೇಳಿದ್ದ ಮಾತಿನಿಂದ ಪ್ರೇರಣೆಗೊಂಡು ಕೇರಳದ ಕುಟುಂಬವೊಂದು ಬರೋಬ್ಬರಿ ಒಂದು ಲಕ್ಷ ರೂಪಾಯಿಯನ್ನು ಉಳಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 ಅಂದು ಪ್ರಧಾನಿ ಮೋದಿ ಈ 21 ದಿನಗಳ ಲಾಕ್‌ಡೌನ್‌ ಅವಧಿಯಲ್ಲಿ ಯಾವುದಾದರೂ ರಚನಾತ್ಮಕ ಕೆಲಸದಲ್ಲಿ ತೊಡಗಿಕೊಳ್ಳಿ ಎಂದು ಕರೆ ನೀಡಿದ್ದರು. ಮೋದಿಯವರ ಈ ಮಾತಿಗೆ ಪ್ರೇರಣೆ ಪಡೆದ ಕೇರಳದ ಕಣ್ಣೂರಿನ ಶನೀಶ್ ಎನ್ನುವವರು ತಮ್ಮ ತಮ್ಮ ಹಾಗೂ ಸಹೋದರಿಯೊಂದಿಗೆ ಬಾವಿ ಅಗೆಯಲು ಆರಂಭ ಮಾಡಿದ್ದು, ಸದ್ಯ ಬಾವಿ ನಿರ್ಮಾಣ ಕಾರ್ಯ ಮುಕ್ತಾಯದ ಹಂತದಲ್ಲಿದೆ. 

ಒಂದು ವೇಳೆ ಕೇರಳದ ಈ ಕುಟುಂಬ ಬಾವಿ ಅಗೆಯಲು ಕೆಲಸಗಾರರಿಗೆ ಕಾಂಟ್ರಾಕ್ಟ್ ನೀಡಿದ್ದಲ್ಲಿ ಅವರಿಗೆ ಒಂದು ಲಕ್ಷ ರೂಪಾಯಿ ವೆಚ್ಚ ತಗುಲುತ್ತಿತ್ತು. ಒಟ್ಟಾರೆ ಮೋದಿ ಮಾತಿನಿಂದ ಪ್ರೇರಣೆಗೊಂಡು ಬಾವಿ ನಿರ್ಮಾಣ ಕಾರ್ಯ ಮಾಡಿ 21 ದಿನಗಳ ಲಾಕ್‌ಡೌನ್‌ ಅವಧಿಯನ್ನು ಒಂದೊಳ್ಳೆ ಕೆಲಸಕ್ಕೆ ಉಪಯೋಗಿಸಿದ ಈ ಕುಟುಂಬದ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶನೀಶ್ ಅವರ ಕುಟುಂಬ ಲಾಕ್‌ಡೌನ್‌ ಆರಂಭದ ದಿನಗಳಲ್ಲಿ ಶುರು ಮಾಡಿದ ಕೆಲಸ ಇದೀಗ ಅಂತ್ಯದತ್ತ ಸಾಗುತ್ತಿದ್ದು, ಭೂಮಿ ತಾಯಿ ನೀರನ್ನು ಕೊಟ್ಟು ಕರುಣಿಸಿದ್ದಾಳೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ. ಈ ಕುರಿತು ಶನೀಶ್ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಮಾಡಿರತಕ್ಕಂತಹ ಪೋಸ್ಟ್ ಒಂದು ಸಿಕ್ಕಪಟ್ಟೆ ಸದ್ದು ಮಾಡಿದೆ.

Comments