ಸುಳ್ಳು ಸುದ್ದಿ ಹಬ್ಬಿಸಿ ಜೈಲು ಸೇರಿದ ಪತ್ರಕರ್ತ

ಕೇಂದ್ರ ಸರ್ಕಾರದ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದ ಪತ್ರಕರ್ತನ ವಿರುದ್ಧ ಮಹಾರಾಷ್ಟ್ರ ಪೊಲೀಸರು ಪ್ರಕರಣ ದಾಖಲಿಸಿ ಜೈಲಿಗಟ್ಟಿದ ಪ್ರಕರಣ  ವರದಿಯಾಗಿದೆ .ನಿನ್ನೆ ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ ತಮ್ಮ ತಮ್ಮ ತವರಿಗೆ ತೆರಳಲು ಸಾವಿರಾರು ವಲಸೆ ಕಾರ್ಮಿಕರು ಸೇರಿದ್ದರು. ಕೊರೋನಾ ವೈರಸ್ ಹರಡುತ್ತಿರುವ ಈ ಸಂದರ್ಭದಲ್ಲಿ ಕಾರ್ಮಿಕರ ಈ ನಡೆ ನಿಜಕ್ಕೂ ಆತಂಕ ಮೂಡಿಸುವಂತಿತ್ತು. ಈ ಹಿಂದೆ ಪ್ರಧಾನಿ ಘೋಷಣೆ ಮಾಡಿದ್ದ ಲಾಕ್ ಡೌನ್ ಅವಧಿ ನಿನ್ನೆಗೆ ಮುಕ್ತಾಯವಾದ ಹಿನ್ನಲೆಯಲ್ಲಿ ಕಾರ್ಮಿಕರು ತಮ್ಮ ತಮ್ಮ ತವರಿಗೆ ಮರಳಲು ಆಗಮಿಸಿದ್ದರು. ಆದರೆ ಕೂಡಲೇ ಎಚ್ಚೆತ್ತ ಪೊಲೀಸರು ಲಾಠಿ ಚಾರ್ಜ್ ಮಾಡಿ ಎಲ್ಲರನ್ನೂ ಚದುರಿಸಿದ್ದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಾಂದ್ರಾ ಪೊಲೀಸರು ಖಾಸಗಿ ಸುದ್ದಿವಾಹಿನಿಯ ಪತ್ರಕರ್ತನ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಒಸ್ಮಾನಾಬಾದ್ ಮೂಲದ ಪತ್ರಕರ್ತ ರಾಹುಲ್ ಕುಲಕರ್ಣಿ ಎಂಬಾತನ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಈತ ಲಾಕ್ ಡೌನ್ ಮುಕ್ತಾಯವಾದ ಹಿನ್ನಲೆಯಲ್ಲಿ ವಲಸೆ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ಜನ್ ಸಾಧಾರಣ್ ವಿಶೇಷ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ ಎಂದು ವರದಿ ಮಾಡಿದ್ದ. ಆದರೆ ವಾಸ್ತವವಾಗಿ ಸರ್ಕಾರ ಅಂತಹ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಹೀಗಾಗಿ ವದಂತಿ ಹಬ್ಬಿಸಿದ ಆರೋಪದ ಮೇರೆಗೆ ಆತನ ವಿರುದ್ಧ ಐಪಿಸಿ ಸೆಕ್ಷನ್ 188, 269, 270 ಮತ್ತು 117ರ ಅಡಿಯಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ.


Comments