ತುಮಕೂರಿನ ಮಸೀದಿಗಳಲ್ಲಿ 240 ಜಮಾತ್‌ ಸದಸ್ಯರು ಪತ್ತೆ : ಒಬ್ಬನಿಗೆ ಪಾಸಿಟಿವ್

ತುಮಕೂರು ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿರುವ 240 ಜಮಾತ್‌ ಸದಸ್ಯರನ್ನು ಕೋವಿಡ್‌ 19 ತಪಾಸಣೆಗೆ ಒಳಪಡಿಸಲಾಗಿದೆ ಈ ಪೈಕಿ ಒಬ್ಬನಿಗೆ  ಮಾತ್ರ ಪಾಸಿಟಿವ್‌ ಕಂಡುಬಂದಿದೆ ಎಂದು ವರದಿ ಆಗಿದೆ ಈ ಸಂಬಂಧ ಮಾಹಿತಿ ನೀಡಿರುವ   ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ ಕುಮಾರ್‌ ಅವರು ದೆಹಲಿಯ ಸಂಪರ್ಕ ಇಲ್ಲದಿದ್ದರೂ ಜಿಲ್ಲೆಯ ಮಸೀದಿಯಲ್ಲಿದ್ದ ಎಲ್ಲಾ ತಬ್ಲಿಘಿಗಳನ್ನೂ ತಪಾಸಣೆಗೆ ಒಳಪಡಿಸಲಾಗಿದೆ. ಅದರಲ್ಲಿ ಗುಜರಾತ್‌ ಮೂಲದ ವ್ಯಕ್ತಿಯಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ. ಅವರಲ್ಲಿ ಸೋಂಕಿನ ಯಾವುದೇ ಲಕ್ಷಣಗಳಿರಲಿಲ್ಲ. ಸೋಂಕಿನ ಲಕ್ಷಣಗಳಿಲ್ಲದೇ ಪಾಸಿಟಿವ್‌ ಬರುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ. ಮೈಸೂರಿನಲ್ಲಿ ಕೂಡ ಈ ರೀತಿಯಾಗಿದೆ ಎಂದರು.

ಹೊರ ರಾಜ್ಯ ಅಥವಾ ಹೊರ ಜಿಲ್ಲೆಯಿಂದ ಬಂದು ಜಿಲ್ಲೆಯ ಮಸೀದಿಗಳಲ್ಲಿ ತಂಗಿದ್ದರೆ ತಕ್ಷಣವೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ಜಿಲ್ಲಾ ವಕ್ಫ್ ಅಧಿಕಾರಿಗಳ ಮೂಲಕ ಮನವಿ ಮಾಡಿದ್ದೇವೆ. ಆ ರೀತಿ ಇದ್ದವರನ್ನು ತಪಾಸಣೆಗೆ ಒಳಪಡಿಸಲಾಗುವುದು, ಪಾಸಿಟಿವ್‌ ಕಂಡುಬಂದಲ್ಲಿ ಚಿಕಿತ್ಸೆ ನೀಡಲಾಗುವುದು. ತಿಪಟೂರಿನಲ್ಲಿ ಈ ರೀತಿಯ 41 ಪ್ರಕರಣವನ್ನು ನಾವಾಗಿಯೇ ಕಂಡು ಹಿಡಿದಿದ್ದೇವೆ ಎಂದು ರಾಕೇಶ್‌ ಕುಮಾರ್‌ ತಿಳಿಸಿದರು.

ಇವರಾರೂ ತಾವಾಗಿಯೇ ಮುಂದೆ ಬಂದಿರಲಿಲ್ಲ. ಈ ಎಲ್ಲರ ತಪಾಸಣೆ ನಡೆಸಿದ್ದು, ನೆಗೆಟಿವ್‌ ಬಂದಿದೆ. ಈ ರೀತಿಯ ಪ್ರಕರಣಗಳು ಯಾವುದಾದರೂ ಇದೆಯೇ ಎಂದು ತಿಳಿಯಲು ನಾವು ಮನವಿ ಮಾಡಿದ್ದೇವೆ. ಯಾರೇ ಮುಂದೆ ಬಂದು ತಪಾಸಣೆ ಮಾಡಿಸಿಕೊಂಡಲ್ಲಿ ಆ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದರು.


Comments