ಗೋಧಿ ಚೀಲದಲ್ಲಿ ಹಣ ಹಂಚಿದ್ದ ಅಮಿರ್ ಖಾನ್ ?: ಬಯಲಾಯಿತು ಸತ್ಯ ವಿಚಾರ

ಕೊರೊನ ಸಂಕಷ್ಟ ಸಂದರ್ಭ ಬಾಲಿವುಡ್ ನಟ ಅಮಿರ್  ಖಾನ್  ಬಡ ಜನರಿಗೆ‌ ಹಣ ಹಂಚಿದ್ದಾರೆ ಎಂದು ವ್ಯಕ್ತಿಯೊಬ್ಬರು ವಿಡಿಯೋ ಮೂಲಕ ಧನ್ಯವಾದ ತಿಳಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಆ ವಿಡಿಯೋ ಕೂಡ  ವೈರಲ್‌ ಆಗಿತ್ತು. ದೆಹಲಿಯಲ್ಲಿ ಹಂಚಲು ತಂದಿದ್ದ ಪ್ರತಿ ಒಂದು ಕೆಜಿ ಗೋಧಿ ಹಿಟ್ಟಿನ ಚೀಲದಲ್ಲಿ ಆಮಿರ್‌ ಖಾನ್‌ 15 ಸಾವಿರ ರೂ. ಹಣ ಇಟ್ಟು ಕಳಿಸಿದ್ದಾರೆ ಎಂದು ವಿಡಿಯೋದಲ್ಲಿ ಹೇಳಲಾಗಿತ್ತು. ಜೊತೆಗೆ ಒಂದು ಫೋಟೋ ಕೂಡ ಗಮನ ಸೆಳೆದಿತ್ತು.

ಆದರೆ ಈ ಬಗ್ಗೆ ಆಮಿರ್‌ ಖಾನ್‌ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಸಹಾಯ ಮಾಡಿದ್ದನ್ನು ಹೇಳಿಕೊಳ್ಳುವ ಗುಣ ಅವರದ್ದಲ್ಲ. ಹಾಗಾಗಿ ಈ ವಿಚಾರವನ್ನು ಗೌಪ್ಯವಾಗಿ ಮಾಡುತ್ತಿದ್ದಾರೆ ಎಂದು ಆಮಿರ್‌ ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಅಭಿಪ್ರಾಯ ಕೂಡ  ವ್ಯಕ್ತಪಡಿಸಿದ್ದರು. ಇನ್ನು ಹಲವರು ಇದೊಂದು ಸುಳ್ಳು ಸುದ್ದಿ ಅಮಿರ್ ಖಾನ್ ಒಂದು ರೂಪಾಯಿ ಕೂಡ ನೀಡಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

 ಇನ್ನು ಈ  ಬಗ್ಗೆ ಸ್ವತಃ ಆಮಿರ್‌ ಖಾನ್‌ ಅವರೇ ಸ್ಪಷ್ಟನೆ  ನೀಡಿದ್ದಾರೆ.'ಗೋಧಿ ಚೀಲದಲ್ಲಿ ಹಣ ಇಟ್ಟವನು ನಾನಲ್ಲ. ಅದು ಸಂಪೂರ್ಣ ಸುಳ್ಳು ಸುದ್ದಿ ಆಗಿರಬಹುದು ಅಥವಾ ರಾಬಿನ್‌ ಹುಡ್‌ಗೆ ತನ್ನ ಬಗ್ಗೆ ಹೇಳಿಕೊಳ್ಳಲು ಇಷ್ಟ ಇಲ್ಲದಿರಬಹುದು. ಮನೆಯಲ್ಲೇ ಇರಿ' ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.ಆಮಿರ್‌ ಖಾನ್‌ ಈ ಕೆಲಸ ಮಾಡಿಲ್ಲ ಎಂಬುದಾದರೆ ನಿಜಕ್ಕೂ ಆ ಗೋಧಿ ಚೀಲಗಳಲ್ಲಿ ಹಣ ಇಟ್ಟು ಹಂಚಿದವರು ಯಾರು ಎಂಬ ಪ್ರಶ್ನೆ ಈಗ ಮೂಡಿದೆ.

Comments