ಗಲ್ಫ್ ರಾಷ್ಟ್ರಗಳಲ್ಲಿ ನೆಲಕಚ್ಚಿದ ಉದ್ಯಮಗಳು!

ಕೊರೊನಾ ವೈರಸ್ ನಿಧಾನವಾಗಿ ವಿಶ್ವದ ಆರ್ಥಿಕತೆಯನ್ನು ಬಲಿ ಪಡೆಯುತ್ತಿದೆ. ಲಕ್ಷಾಂತರ ಜನರ ಸಾವಿಗೆ ಕಾರಣವಾಗಿರುವ ಈ ಮಹಾಮಾರಿಯನ್ನು ಒದ್ದೋಡಿಸಲು ವಿಶ್ವದ ವಿಜ್ಞಾನಿಗಳು ಔಷಧಿ ತಯಾರಿಸಲು ಅವಿರತವಾಗಿ ಸಂಶೋಧನೆ ನಡೆಸುತ್ತಿದ್ದಾರೆ. ವಿಶ್ವದ ದೊಡ್ಡಣ್ಣ ಎಂದು ಕರೆಸುವ ಅಮೆರಿಕಾ ಒಂದರಲ್ಲಿಯೇ 75000ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಈ ವೈರಸ್ ನ ಅಟ್ಟಹಾಸಕ್ಕೆ ಸಾಕ್ಷಿಯಾಗಿದೆ.

ಇನ್ನು ತೈಲ ಸಂಪತ್ಭರಿತ ರಾಷ್ಟ್ರವಾಗಿರೋ ಗಲ್ಫ್ ರಾಷ್ಟ್ರಗಳಲ್ಲಿಯೂ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ಅಲ್ಲಿ ಉದ್ಯಮಗಳನ್ನು ಈ ವೈರಸ್ ಅಪೋಷನ ತೆಗೆದುಕೊಳ್ಳುವ ಭೀತಿ ಎದುರಾಗಿದೆ. ಈಗಾಗಲೇ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿನ ಹಲವಾರು ಉದ್ಯಮಗಳು ಬಾಗಿಲು ಮುಚ್ಚುವ ಪರಿಸ್ಥಿತಿಗೆ ಬಂದು ನಿಂತಿರುವುದಾಗಿ ಗಲ್ಫ್ ನ್ಯೂಸ್ ವರದಿ ಮಾಡಿದೆ.

ದುಬೈ ಒಂದರಲ್ಲಿಯೇ 11,000 ಕ್ಕೂ ಹೆಚ್ಚು ಹೋಟೆಲ್ ಹಾಗೂ ರೆಸ್ಟೋರೆಂಟ್ ಉದ್ಯಮಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ 40 ರಿಂದ 50 ಶೇಕಡಾ ಹೋಟೆಲ್ ಗಳು ಮುಂದಿನ ಕೆಲ ತಿಂಗಳುಗಳಲ್ಲಿ ಮುಚ್ಚಲಿದೆ ಹಾಗೂ ಈಗಾಗಲೇ ಹಲವಾರು ಹೋಟೆಲ್ ಗಳು ತಮ್ಮ ಅಂಗಡಿಗಳ ಮುಂದೆ ಹೋಟೆಲ್ ಮಾರಾಟಕ್ಕಿದೆ ಎನ್ನುವ ಭಿತ್ತಿಪತ್ರಗಳನ್ನು ಹಾಕಿದ್ದಾರೆ ಎನ್ನುವುದನ್ನು ಅಲ್ಲಿನ ಜನಪ್ರಿಯ ಸುದ್ದಿ ಸಂಸ್ಥೆ ಗಲ್ಫ್ ನ್ಯೂಸ್ ವರದಿ ಮಾಡಿದೆ.


Comments