ಭಾರತೀಯ ಸೇನೆಯಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಅಪಪ್ರಚಾರ ಮಾಡಲು ಬ್ರಿಟನ್‌ ಸಂಸದರಿಗೆ 30 ಲಕ್ಷ ನೀಡಿದ್ದ ಪಾಕ್‌, ಅಸಲಿಯತ್ತು ಬಯಲು!

ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಅಪಪ್ರಚಾರ ನಡೆಸಲು ಇಮ್ರಾನ್‌ ಖಾನ್‌ ಸರಕಾರವು ಬ್ರಿಟನ್‌ ಸಂಸದರು ರಚಿಸಿಕೊಂಡಿದ್ದ ಸರ್ವಪಕ್ಷೀಯ ಸಂಸದೀಯ ನಿಯೋಗಕ್ಕೆ ಹಣ ಸುರಿದ ಸಂಗತಿ ಬಹಿರಂಗಗೊಂಡಿದೆ.

ನಿಯೋಗದ ನೇತೃತ್ವ ವಹಿಸಿದ್ದ ಲೇಬರ್‌ ಪಕ್ಷದ ಸಂಸದೆ ಡೆಬ್ಬಿ ಅಬ್ರಾಹಮ್ಸ್‌ ಅವರ ವೀಸಾ ಅವಧಿ ಮುಕ್ತಾಯಗೊಂಡಿದ್ದರಿಂದ ಅವರಿಗೆ ದೇಶದೊಳಗೆ ಪ್ರವೇಶ ನೀಡದೆ ಫೆ.17ರಂದು ಅವರನ್ನು ದಿಲ್ಲಿಯಿಂದ ದುಬೈಗೆ ಕಳುಹಿಸಿಕೊಡಲಾಗಿತ್ತು. ಮಾರನೇ ದಿನ ಆಕೆ ಪಾಕಿಸ್ತಾನಕ್ಕೆ ವಿಮಾನದಲ್ಲಿ ತೆರಳಿ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಭೇಟಿ ಮಾಡಿ ತಮ್ಮ ನಿಯೋಗಕ್ಕೆ ಸಲ್ಲಬೇಕಿದ್ದ ಹಣವನ್ನು ಪಡೆದಿರುವುದು ಬಯಲಾಗಿದೆ.

ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ಈ ಸಂಬಂಧ ಕೆಲವು ರಶೀದಿಗಳನ್ನು ಕೂಡ ಪ್ರದರ್ಶಿಸಿದ್ದು ಪಾಕಿಸ್ತಾನ ಕರೆನ್ಸಿಯಲ್ಲಿ 31.2 ಲಕ್ಷ ರೂ. ನೀಡಿದೆ ಎಂದು ಹೇಳಲಾಗಿದೆ. ಫೆ.18 ರಿಂದ 22ರವರೆಗೆ ಬ್ರಿಟನ್‌ ಸಂಸದರ ನಿಯೋಗ ಪಿಒಕೆಗೆ ಭೇಟಿ ನೀಡಿತ್ತು. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ರದ್ದುಪಡಿಸಿ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದ್ದನ್ನು ಸಂಸದೆ ಡೆಬ್ಬಿ ವಿರೋಧಿಸಿದ್ದರು.

Comments