ಭಾರತದ ನಿಯಂತ್ರದಲ್ಲಿರುವ ಪಾಂಗಾಂಗ್ ದಕ್ಷಿಣ ವಲಯದ ತ್ಸೊ ಸರೋವರ ಸುತ್ತಲಿನ ಗುಡ್ಡಗಾಡುಗಳಲ್ಲಿ ಚೀನಾ ರಹಸ್ಯವಾಗಿ ಅಳವಡಿಸಿದ್ದ ಕ್ಯಾಮೆರಾ, ಸೆನ್ಸಾರ್‌ಗಳ ಕಣ್ಣು ತಪ್ಪಿಸಿ ಭಾರತೀಯ ಯೋಧರು ನೆರೆ ರಾಷ್ಟ್ರದ ಸೈನಿಕರಿಗೆ ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತೀಯ ಸೇನೆಯ ಪ್ರತಿ ಚಟುವಟಕೆಗಳ ಮೇಲೆ ನಿಗಾ ಇರಿಸಲು ಚೀನಾ ಈ ಕುತಂತ್ರ ಅನುಸರಿಸಿದೆ. ಸರೋವರದ ಬಳಿಯ ಎತ್ತರದ ಗುಡ್ಡಪ್ರದೇಶ ಸ್ಪಾಂಗುರ್ ಗ್ಯಾಪ್ ತನ್ನದೆಂದು ವಾದಿಸುತ್ತಿರುವ ಚೀನಾ ಅದರ ಮೇಲಿನಿಂದ ಭಾರತ ಸೇನೆಯ ಮೇಲೆ ನಿಗಾ ಇರಿಸುವುದು ಸುಲಭ ಎಂದು ಭಾವಿಸಿದೆ. ಆ.29ರಂದು 200 ಯೋಧರು ಭಾರತೀಯ ಸೇನೆಯ ಚೆಕ್‌ಪೋಸ್ಟ್‌ಗೆ ನುಗ್ಗಿದರೆ, ಅದೇ ವೇಳೆ 500 ಸೈನಿಕರು ಸ್ಪಾಂಗುರ್ ಗ್ಯಾಪ್‌ನಲ್ಲಿನ ಪರ್ವತ ಏರತೊಡಗಿದ್ದರು. ಅದನ್ನು ಗಮನಿಸಿದ ಸ್ಪೆಷಲ್ ಆಪರೇಷನ್ಸ್ ಯೂನಿಟ್ (ಎಸ್‌ಒಯು) ಮತ್ತು ಸಿಖ್ ಲೈಟ್ ಇನ್‌ಫ್ಯಾಂಟ್ರಿ ಯೋಧರು ಚೀನಾ ಕಣ್ಗಾವಲಿಗೆ ಸಿಲುಕದೇ ಜಾಣತನದಿಂದ ಚೀನಾ ಯೋಧರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಬಳಿಕ ಚೀನಾದ ಕ್ಯಾಮೆರಾ ಮತ್ತು ಸೆನ್ಸಾರ್‌ಗಳನ್ನು ಪತ್ತೆ ಮಾಡಿ ಕಿತ್ತು ಹಾಕಿದ್ದಾರೆ.
ಶಾಂತಿ ಸ್ಥಾಪನೆ ಪ್ರಯತ್ನವಾಗಿ ಲೇಹ್ ಜಿಲ್ಲೆಯ ಛುಶುಲ್ ಪ್ರದೇಶದಲ್ಲಿ ಉಭಯ ದೇಶಗಳ ಹಿರಿಯ ಸೇನಾಧಿಕಾರಿಗಳ ಸಭೆ ಮಂಗಳವಾರವೂ ನಡೆದಿದೆ. ಭವಿಷ್ಯದಲ್ಲಿ ಯಾವುದೇ ರೀತಿಯ ಪ್ರಚೋದನಾತ್ಮಕ ನಡೆ ಅನುಸರಿಸಿದರೆ ಕಠಿಣ ಪ್ರತಿಕ್ರಿಯೆ ನೀಡಲಾಗುವುದು ಎಂದು ಭಾರತ ಎಚ್ಚರಿಕೆ ನೀಡಿದೆ. "ಚೀನಾ ಪದೇಪದೆ ಏನಾದರೊಂದು ಕಿತಾಪತಿ ಮಾಡುತ್ತಲೇ ಇದೆ. ಮೇಲ್ನೋಟಕ್ಕೆ ಗಡಿಯಲ್ಲಿ ಎಲ್ಲವೂ ಸಹಜವಾಗಿದೆ ಎನ್ನುವ ಸ್ಥಿತಿ ಇದ್ದರೂ, ವಾಸ್ತವಿಕವಾಗಿ ಉದ್ವಿಗ್ನತೆ ಮುಂದುವರಿದಿದೆ," ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಂಗಾಲಾದ ಚೀನಾ
ಭಾರತದ ಈ ಕ್ರಮವು ಚೀನಾದ ಪ್ರಾದೇಶಿಕ ಸಾರ್ವಭೌಮತ್ವವನ್ನು ತೀವ್ರವಾಗಿ ಉಲ್ಲಂಘಿಸಿದೆ, ಉಭಯ ದೇಶಗಳ ನಡುವಿನ ಒಪ್ಪಂದಗಳು, ಪ್ರೋಟೋಕಾಲ್ ಗಳು ಮತ್ತು ಒಮ್ಮತವನ್ನು ಗಂಭೀರವಾಗಿ ಉಲ್ಲಂಘಿಸಿದೆ ಚೀನಾ ದೂರಿದೆ.
ಚೀನಾ-ಭಾರತ ಗಡಿ ಪ್ರದೇಶಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಭಾರತ ಏನು ಮಾಡಿದೆ ಎಂಬುದು ನೆಲದ ಪರಿಸ್ಥಿತಿಯನ್ನು ಸರಾಗಗೊಳಿಸುವ ಮತ್ತು ತಣ್ಣಗಾಗಿಸಲು ಎರಡೂ ಕಡೆಯವರು ಮಾಡಿದ ಪ್ರಯತ್ನಗಳಿಗೆ ವಿರುದ್ಧವಾಗಿದೆ ಮತ್ತು ಚೀನಾ ಇದನ್ನು ತೀವ್ರವಾಗಿ ವಿರೋಧಿಸುತ್ತದೆ ಎಂದು ಚೀನಾ ರಾಯಭಾರ ಕಚೇರಿ ಹೇಳಿದೆ.
Comments
Post a Comment