ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯ ಕಣ ದಿನೇ ದಿನೇ ರಂಗೇರಿದ್ದು ಬಿಜೆಪಿಯ ಹಲವು ಸ್ಟಾರ್ ಪ್ರಚಾರಕರು ಈಗಾಗಲೇ ಚುನಾವಣಾ ಪ್ರಚಾರವನ್ನು ನಡೆಸಿದ್ದಾರೆ . ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ಪರ ಚುನಾವಣಾ ಅಖಾಡಕ್ಕೆ ಇಳಿದು ಅಭಿಯಾನ ಆರಂಭಿಸಿದ್ದಾರೆ .
ಹೈದರಾಬಾದ್‌ಗೆ ಆಗಮಿಸುತ್ತಿದ್ದಂತೇ ಚಾರ್‌ಮಿನಾರ್ ಪಕ್ಕದಲ್ಲೇ ಇರುವ ಪ್ರಸಿದ್ಧ ಭಾಗ್ಯಲಕ್ಮೀ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಅಮಿತ್ ಶಾ, ಪ್ರಚಾರಕ್ಕೂ ಮೊದಲು ದೇವಿಯ ಆಶೀರ್ವಾದ ಪಡೆದರು.ಇದಕ್ಕೂ ಮೊದಲು ಬೇಗಂಪೇಟ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಮಿತ್ ಶಾ ಅವರಿಗೆ ಭರ್ಜರಿ ಸ್ವಾಗತ ಕೋರಿದ ಬಿಜೆಪಿ ಕಾರ್ಯಕರ್ತರು, ಮೆರವಣಿಗೆ ಮೂಲಕ ಅಮಿತ್ ಶಾ ಅವರನ್ನು ಭಾಗ್ಯಲಕ್ಷ್ಮೀ ದೇವಸ್ಥಾನಕ್ಕೆ ಕರೆತಂದರು.
ಈ ವೇಳೆ ಮಾತನಾಡಿದ ಅಮಿತ್ ಶಾ, ರಾಜ್ಯದ ಆಡಳಿತಾರೂಢ ಟಿಆರ್‌ಎಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಹೈದರಾಬಾದ್ ಸೇರಿದಂತೆ ಸಂಪೂರ್ಣ ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ಹರಿಹಾಯ್ದರು.
ಇದೇ ವೇಳೆ ಎಐಎಂಐಎಂ ಪಕ್ಷವನ್ನೂ ತರಾಟೆಗೆ ತೆಗೆದುಕೊಂಡ ಅಮಿತ್ ಶಾ, ಒವೈಸಿ ಸಹೋದರರು ಧರ್ಮದ ರಾಜಕಾರಣ ಮಾಡುವುದನ್ನು ಬಿಟ್ಟರೆ ನಗರದ ಜನತೆಗೆ ಬೇರೆನೂ ಕೊಡುಗೆ ನೀಡಿಲ್ಲ ಎಂದು ಕಿಡಿಕಾರಿದರು.
Comments
Post a Comment