ಹಿಜ್ಬುಲ್ ಕಮಾಂಡರ್ ಸೈಫುಲ್ಲಾ ನನ್ನು ಮುನ್ನುಗ್ಗಿ ಹೊಡೆದುರುಳಿಸಿದ ಸೇನೆ , ಇನ್ನೋರ್ವ ಉಗ್ರನ ಸಜೀವ ಸೆರೆ

 ಜಮ್ಮು ಕಾಶ್ಮೀರದ ರಂಗ್ರೆತ್ ಪ್ರದೇಶದಲ್ಲಿ ಭಾನುವಾರ ನಡೆದ ಗುಂಡಿನ ಚಕಮಕಿಯಲ್ಲಿ ಹಿಜ್ಬುಲ್ ಮುಹಾಜಿದ್ದೀನ್ ಮುಖ್ಯ ಕಮಾಂಡರ್ ಡಾ.ಸೈಫುಲ್ಲಾ ಸಾವನ್ನಪ್ಪಿದ್ದಾನೆಂದು ವರದಿಯಾಗಿದೆ. ಖಚಿತ ಮಾಹಿತಿಯ ಮೇರೆಗೆ ಬೆಳಿಗ್ಗೆ ಪ್ರಾರಂಭಿಸಲಾದ ಕಾರ್ಯಾಚರಣೆಯಲ್ಲಿ ಒಬ್ಬ ಭಯೋತ್ಪಾದಕನನ್ನು ಸಜೀವವಾಗಿ  ಸೆರೆಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರಕ್ಕೆ ಬಂದ ಕೆಲವು ಭಯೋತ್ಪಾದಕರು ರಂಗ್ರೆತ್ ನಲ್ಲಿ ಅಡಗಿಕೊಂಡಿದ್ದಾರೆ ಎಂಬ ಮಾಹಿತಿ ತಮಗೆ ದೊರೆಕಿದ್ದಾಗಿ ಕಾಶ್ಮೀರದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ರೇಂಜ್ ವಿಜಯ್ ಕುಮಾರ್ ತಿಳಿಸಿದ್ದಾರೆ. ಜಂಟಿ ಕಾರ್ಯಾಚರಣೆಯನ್ನು ಪೊಲೀಸರು, ಸಿಆರ್‌ಪಿಎಫ್ ನಡೆಸಿದ್ದು ನಂತರದಲ್ಲಿ ಇದಕ್ಕೆ ಸೇನಾಪಡೆಯ ಸದಸ್ಯರೂ ಸೇರಿದ್ದರು.

ಎನ್‌ಕೌಂಟರ್ ಸಮಯದಲ್ಲಿ ಒಬ್ಬ ಭಯೋತ್ಪಾದಕನನ್ನು ಕೊಲ್ಲಲಾಯಿತು ಮತ್ತು ಇನ್ನೊಬ್ಬನನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ ಎಂದು ಕುಮಾರ್ ಹೇಳಿದರು. ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟ ಉಗ್ರಗಾಮಿ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯ ಕಮಾಂಡರ್ ಡಾ.ಸೈಫುಲ್ಲಾ ಎಂದು  ಮೂಲಗಳು ತಿಳಿಸಿವೆ. ಹಿಜ್ಬುಲ್ ಮುಖ್ಯಸ್ಥನ ಕುಟುಂಬ ಸದಸ್ಯರು ಶವವನ್ನು ಗುರುತಿಸಿದ ಬಳಿಕ ಇದು ಖಚಿತವಾಗಲಿದೆ.

ಸೈಫುಲ್ಲಾ ಹತ್ಯೆ ಭದ್ರತಾ ಪಡೆಗಳ ದೊಡ್ಡ ಯಶಸ್ಸು ಎಂದು ಕುಮಾರ್ ಹೇಳಿದ್ದಾರೆ. ಈ ವರ್ಷದ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟ ಎರಡನೇ ಹಿಜ್ಬುಲ್ ಮುಖ್ಯಸ್ಥ ಇವನಾಗಿದ್ದಾನೆ. ಇದಕ್ಕೆ ಮುನ್ನ ಈ ವರ್ಷ ಮೇ ತಿಂಗಳ ಆರಂಭದಲ್ಲಿ, ಹಿಜ್ಬುಲ್ ಕಾರ್ಯಾಚರಣಾ ಕಮಾಂಡರ್ ಆಗಿದ್ದ ರಿಯಾಜ್ ನಾಯ್ಕೂ ಕೂಡ ಪುಲ್ವಾಮಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟಿದ್ದನು. ಆ ನಂತರ  ಡಾ. ಸೈಫುಲ್ಲಾ ಹಿಜ್ಬುಲ್ ನ ನೂತನ ಮುಖ್ಯಸ್ಥನಾಗಿ ನೇಮಕವಾಗಿದ್ದ ಎಂದು ಹೇಳಲಾಗಿದೆ.

Comments