ಇದಕ್ಕೆ ಕಾರಣರಾದವರನ್ನು ಹುಡುಕಿ ಕೊಲ್ಲುತ್ತೇವೆ ಎಂದು ಗುಡುಗಿದ ಅಮೇರಿಕ ಅಧ್ಯಕ್ಷ ಜೋ ಬಿಡೆನ್

 ಕಾಬೂಲ್ ವಿಮಾನ ನಿಲ್ದಾಣದ ಮೇಲೆ ನಡೆದ ಭಯೋತ್ಪಾದಕ ದಾಳಿಯ ವಿರುದ್ಧ ಅಮೆರಿಕ ಕೆಂಡಾಮಂಡಲಗೊಂಡಿದೆ. ಭೀಕರ ಪರಿಣಾಮಗಳ ದಾಳಿಗೆ ಹೊಣೆಗಾರರಾಗಿರುವ ಇಸ್ಲಾಮಿಕ್ ಸ್ಟೇಟ್ (ISIS) ಗೆ ಅಮೇರಿಕ ಅಧ್ಯಕ್ಷ ಜೋ ಬಿಡೆನ್ (Joe Biden) ಎಚ್ಚರಿಕೆ ನೀಡಿದ್ದಾರೆ. ತನ್ನ ಸೈನಿಕರು ಮತ್ತು ಸಾಮಾನ್ಯ ಆಫ್ಘನ್ನರ ಸಾವಿಗೆ ಐಸಿಸ್ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆಯ ಸಂದೇಶ ನೀಡಿರುವ ಜೋ ಬಿಡೆನ್,  ಈ ಗಾಯವನ್ನು ನಾವು ಮರೆಯುವುದಿಲ್ಲ. ನಾವು ಪ್ರತಿಯೊಬ್ಬ ಭಯೋತ್ಪಾದನನ್ನು ಹುಡುಕಿ ಹುಡುಕಿ ಕೊಲ್ಲುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದಾರೆ.


ಕಾಬೂಲ್‌ ವಿಮಾನ ನಿಲ್ದಾಣ ಅತ್ಯಂತ ಅಪಾಯದಲ್ಲಿದ್ದು ಉಗ್ರ ದಾಳಿ ಬೆದರಿಕೆ ಇದೆ ಎಂದು ಬ್ರಿಟನ್ ಹೇಳಿಕೆ ಬೆನ್ನಲ್ಲೇ ವಿಮಾನ ನಿಲ್ದಾಣದ ಸಂಕೀರ್ಣದಲ್ಲಿ ಸಂಭವಿಸಿದ್ದ ಅವಳಿ ಸ್ಫೋಟ ಪ್ರಕರಣದಲ್ಲಿ 60 ಮಂದಿ ಆಫ್ಘಾನಿಸ್ತಾನದ ಪ್ರಜೆಗಳು ಹಾಗೂ 12 ಮಂದಿ ಅಮೆರಿಕ ಸೇನಾ ಸಿಬ್ಬಂದಿಗಳು ಸಾವನ್ನಪ್ಪಿದ್ದು 140 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.


ಅಮೆರಿಕ ತನ್ನ ಸೇನಾ ಪಡೆಯನ್ನು ವಾಪಸ್ ಕರೆಸಿಕೊಳ್ಳುತ್ತಿರುವ ಕೊನೆಯ ಹಂತದಲ್ಲಿ ಈ ಸ್ಫೋಟ ಸಂಭವಿಸಿದ್ದು, ಕಾಬೂಲ್ ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಭದ್ರತಾ ಅಲರ್ಟ್ ನ್ನು ಘೋಷಿಸಿದೆ.


11 ನೌಕಾಪಡೆ ಸಿಬ್ಬಂದಿ ಹಾಗೂ ಓರ್ವ ನೌಕಾಪಡೆ ವೈದ್ಯರು ಸಾವನ್ನಪ್ಪಿದ್ದು, 12 ಮಂದಿ ಸೇವಾ ಸಿಬ್ಬಂದಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದೆಂದು ಊಹಿಸಲಾಗುತ್ತಿದೆ.


ಅಫ್ಘಾನಿಸ್ತಾನದ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ 140 ಕ್ಕೂ ಹೆಚ್ಚು ಅಫ್ಘಾನಿಸ್ತಾನದ ಮಂದಿ ತೀವ್ರವಾಗಿ ಘಟನೆಯಲ್ಲಿ ಗಾಯಗೊಂಡಿದ್ದಾರೆ. ವಿಮಾನ ನಿಲ್ದಾಣದ ಅಬ್ಬೆ ಗೇಟ್ ಬಳಿ ಮೊದಲ ಸ್ಫೋಟ ಸಂಭವಿಸಿದರೆ ಎರಡನೇ ಸ್ಫೋಟ ಮೊದಲ ಸ್ಫೋಟ ಸಂಭವಿಸಿದ ಸ್ಥಳಕ್ಕಿಂತ ಹೆಚ್ಚು ದೂರ ಇರದ ಬರಾನ್ ಹೊಟೇಲ್ ನಲ್ಲಿ ಸಂಭವಿಸಿದೆ.


ಸ್ಫೋಟದ ಜೊತೆಗೆ ಗುಂಡಿನ ಮೊರೆತವೂ ಕೇಳಿಬಂದಿದ್ದು, ಈ ಕ್ಷಣದಲ್ಲಿ ಅಮೆರಿಕ ನಾಗರಿಕರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವುದು ಹಾಗೂ ವಿಮಾನ ನಿಲ್ದಾಣದ ಗೇತ್ ಗಳತ್ತ ಬರುವುದನ್ನು ತಪ್ಪಿಸಬೇಕಿದೆ, ಈ ಪ್ರದೇಶದಲ್ಲಿರುವ ಅಮೆರಿಕ ನಾಗರಿಕರು ಈಸ್ಟ್ ಗೇಟ್ ಅಥವಾ ನಾರ್ತ್ ಗೇಟ್ ಬಳಿ ಇರುವವರು ತಕ್ಷಣವೇ ಅಲ್ಲಿಂದ ಹೊರಡಬೇಕಿದೆ ಎಂದು ಅಮೆರಿಕ ರಾಯಭಾರಿ ಕಚೇರಿ ತಿಳಿಸಿದೆ.

Comments